Fri. Jan 10th, 2025

ಈದುಲ್ ಫಿತ್ರ್‌: ಇಸ್ಲಾಮಿನ ಸೌದರ್ಯದ ಪ್ರತೀಕ

ಲೇ: ಶೈಖುನಾ ಶಂಸುಲ್ ಉಲಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್
ನಿರೂಪಣೆ: ಯೂಸುಫ್ ಎಂ. ಮುಂಡೋಳೆ

ಪುಣ್ಯ ರಂಝಾನ್‌ನ ವಿದಾಯದೊಂದಿಗೆ ಈದುಲ್ ಫಿತ್ರ್ ಆಗಮನವಾಗುತ್ತದೆ. ಆರಾಧನೆಯಲ್ಲಿ ನಿರತವಾದ ಅನುಗ್ರಹೀತ ಹಗಳಿರುಳುಗಳ ನಂತರ ಮಹತ್ತರಾದ ಕೃತಜ್ಞತೆಯ ಸುದಿನವಿದು. ವ್ರತ, ನಮಾಝ್, ಪ್ರಾರ್ಥನೆ, ಸತ್ಕರ್ಮಗಳಲ್ಲಾಗಿ ಒಂದು ತಿಂಗಳುಗಳ ಕಾಲ ಅತೀ ವಿಶಿಷ್ಟವಾದ ತಪಸ್ಸಿನಲ್ಲಾಗಿತ್ತು ಮುಸ್ಲಿಮರು. ಅವರಿಗೆ ಮನಸ್ಸು ಪೂರ್ತಿ ಸಂತೋಷಪಡುವ ಸಂದರ್ಭವಾಗಿದೆ ಈದುಲ್ ಫಿತ್ರ್.

ಇಸ್ಲಾಮಿನಲ್ಲಿ ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾ ಎಂಬ ಎರಡು ಹಬ್ಬಗಳಿವೆ. ಆಧ್ಯಾತ್ಮಿಕ ಚಿಂತನೆ ಮತ್ತು ಆತ್ಮ ಸಂಸ್ಕರಣೆಗೆ ಪ್ರಥಮ ಸ್ಥಾನವನ್ನು ನೀಡಿದ ಧರ್ಮವಾಗಿದೆ ಇಸ್ಲಾಂ. ಅದರ ಜೊತೆಗೆ ನ್ಯಾಯಯುತವಾದ ಆಚರಣೆ ಮತ್ತು ಸಂತೋಷವನ್ನು ವ್ಯಕ್ತಪಡಿಸಲು ಇಸ್ಲಾಂ ಅನುಮತಿಸಿದೆ. ಆದರೆ ಆ ಸಂತೋಷ ಮತ್ತು ಆಚರಣೆಗಳೆಲ್ಲವೂ ಇಸ್ಲಾಮಿನ ಪ್ರಥಮ ಧ್ಯೇಯವಾದ ಆಧ್ಯಾತ್ಮಿಕ ಔನತ್ಯಕ್ಕೆ ಸಹಾಯಮಾಡುವ ರೀತಿಯಲ್ಲಾಗಿರಬೇಕು. ಆಚರಣೆಯಲ್ಲೂ ಆರಾಧನೆಯ ಅಂಶ ಅಡಗಿದೆ ಎಂಬುವುದೇ ಇದರ ಸಾರಾಂಶ. ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾದ ಹಿನ್ನೆಲೆಯೂ ಆದುವೇ ಆಗಿದೆ.

ಇಸ್ಲಾಮಿನ 5 ಆಧಾರಸ್ಥಂಭಗಳಲ್ಲೊಂದು ಹಾಗೂ ಪ್ರಮುಖ ಆರಾಧನ ಕರ್ಮವೂ ಆದ ಪವಿತ್ರ ಹಜ್‌ಗೆ ಸಂಬಂಧಪಟ್ಟಂತೆ ಬಕ್ರೀದ್ ಹಬ್ಬವು ಆಚರಿಸಲ್ಪಡುತ್ತದೆ. ಮಾನವ ಕುಲಕ್ಕೆ ಮಾದರಿ ಪುರುಷರಾಗಿದ್ದ ಹಝ್ರತ್ ಇಬ್ರಾಹೀಂ (ಅ.)ರವರ ತ್ಯಾಗೋಜ್ವಲ ಜೀವನದ ಸ್ಮರಣೆಗಳನ್ನು ಎತ್ತಿ ಹಿಡಿಯುವುದಾಗಿದೆ ಹಜ್ ಮತ್ತು ಬಕ್ರೀದ್ ಹಬ್ಬದ ಉzಶ. ಅಲ್ಲಾಹನ ಆಜ್ಞೆಯ ಮುಂದೆ ಸರ್ವವನ್ನು ತ್ಯಜಿಸುವ ವಿಶ್ವಾಸದಾರ್ಢ್ಯವನ್ನು ಕೈವಶ ಮಾಡಿಕೊಳ್ಳುವಂತೆ ಈದುಲ್ ಅಝ್ಹಾ ಆಹ್ವಾನ ನೀಡುತ್ತದೆ. ದೈವಿಕ ಚಿಂತನೆ, ತ್ಯಾಗಮನೋಭಾವನ್ನು ಎಚ್ಚರಿಸುವ ಬಕ್ರೀದ್ ಹಬ್ಬವು ಖಂಡಿತವಾಗಿಯೂ ಕೇವಲ ಸಂತೋಷ ವ್ಯಕ್ತಪಡಿಸುವುದೋ, ಲೌಕಿಕ ಪ್ರಧಾನವಾದ ಆಚರಣೆಯೋ ಅಲ್ಲ.

ಈದುಲ್ ಫಿತ್ರ್‌ನ ಸ್ಥಿತಿಯೂ ಇದೇ ರೀತಿ ಆಗಿದೆ. ತ್ಯಾಗಪೂರ್ಣವಾದ ವ್ರತಾನುಷ್ಠಾನಕ್ಕೂ, ಆರಾಧನೆಗಳಿಗೂ, ಪ್ರಾರ್ಥನೆಗಳಿಗೂ ವಿರಾಮ ಹಾಕಿ ಆಗಮಿಸುವ ಈದುಲ್ ಫಿತ್ರ್ ಯಾವುದೇ ರೀತಿಯಲ್ಲೂ ಎಲ್ಲವನ್ನು ಮರೆತು ಆನಂದಿಸಲಿಕ್ಕಿರುವ ಸಂದರ್ಭವಲ್ಲ. ಬದಲಾಗಿ ಒಂದು ಮಹತ್ತರವಾದ ಆರಾಧನೆಯನ್ನು ನಿರ್ವಹಿಸಲು ಸಾಧ್ಯವಾದುದ್ದಕ್ಕೆ ಆಳವಾದ ಸಂತೋಷವು ವಿಶ್ವಾಸಿಗಳ ಮನಸ್ಸಿನಲ್ಲಿ ಪುಳಕಿತಗೊಳ್ಳುವ ನಿಮಿಷವಾಗಿದೆ ಅದು. ರಮಝಾನಿನ ಆಗಮನಕ್ಕೂ ಎರಡು ತಿಂಗಳ ಮುಂಚೆಯೇ ಅವರು ಬಹಳ ಕುತೂಹಲದಿಂದ ಕಾದು ನಿಂತಿದ್ದರು. ಒಂದು ಪುಣ್ಯ ತಿಂಗಳೂ ಕೂಡ ಅವರಿಗೆ ಲಭಿಸಿತು. ಅದರಲ್ಲಿ ಸಾಧ್ಯವಾದಷ್ಟು ಸತ್ಕರ್ಮಗಳನ್ನು ಅನುಷ್ಠಾನಗೈದರು. ಇದಕ್ಕಿಂತಲೂ ಹೆಚ್ಚಿನ ಸೌಭಾಗ್ಯ ಅವರಿಗೆ ಬೇರೆಯಿಲ್ಲ. ಆ ಸೌಭಾಗ್ಯ ಸಿದ್ಧಿಯಲ್ಲಿ ಸಂತೃಪ್ತಿಪಡಲೂ, ಅಲ್ಲಾಹನ ಮುಂದೆ ಇನ್ನಷ್ಟು ವಿಧೇಯತ್ವದಿಂದ ಶಿರ ಬಾಗಲು ಉತ್ತೇಚನವನ್ನು ಈದ್ ಅವರಿಗೆ ನೀಡುತ್ತದೆ.

ಪವಿತ್ರ ಕುರ್‌ಆನಿನ ಅವತರಣಕ್ಕೆ ಕೃತಜ್ಞತೆ ವ್ಯಕ್ತಪಡಿಸುವುದು ಕೂಡ ಈದುಲ್ ಫಿತ್ರ್‌ನ ಉದ್ದೇಶವಾಗಿದೆ. ಹಿರಾ ಗುಹೆಯಲ್ಲಿ, ರಮಳಾನಿನಲ್ಲಿ ಏಕಾಂತವಾಗಿ ಧ್ಯಾನದಲ್ಲಿ ಮತ್ತು ಭಕ್ತಿಯಲ್ಲಿ ಪ್ರವಾದಿ (ಸ.ಅ)ರವರು ಕಾಲ ಕಳೆಯುತ್ತಿದ್ದರು. ಹಗಲಿನ ಸಮಯದಲ್ಲಿ ಉಪವಾಸದಲ್ಲೂ, ರಾತ್ರಿ ವೇಳೆ ನಮಾಝಿನಲ್ಲಿ ಸಮಯ ಕಳೆಯುವ ಸನ್ನಿವೇಶವಾಗಿತ್ತು ಅದು. ಈ ಮಧ್ಯೆ ಜಿಬ್‌ರೀಲ್ (ಅ.) ಪ್ರತ್ಯಕ್ಷಗೊಂಡು ಕುರ್‌ಆನ್ ಹೇಳಿಕೊಟ್ಟಿತು. ರಮಝಾನಿನ ಆ ಮಹಾ ಘಟನೆಗೆ ಕೃತಜ್ಞತೆ ಅರ್ಪಿಸುವ ಪ್ರಕ್ರಿಯೆಯನ್ನು ಜಾಗತಿಕ ಮುಸ್ಲಿಮರು ಉಪವಾಸ ಮೂಲಕ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಪ್ರವಾದಿ (ಸ.ಅ)ರವರನ್ನು ಸದಾ ಸಮಯ ಸ್ಮರಿಸುವುದು ಕೂಡ ಇದರಲ್ಲಿ ಅಡಗಿದೆ. ಕುರ್‌ಆನ ರಮಝಾನ್ ತಿಂಗಳಲ್ಲಿ ಅವತರಿಸಿದ ಬಗ್ಗೆ ಸೂರಾ ಅಲ್ ಬಖರದಲ್ಲಿ ಉಲ್ಲೇಖಿಸಲಾಗಿದೆ.

ಮುಸ್ಲಿಂ ಸಮುದಾಯದ ಸಂಘಟಿತ ಶಕ್ತಿಯನ್ನು ಬಲಗೊಳಿಸಬೇಕೆಂಬ ತತ್ವವನ್ನು ಮುಸ್ಲಿಮರು ಯಾವತ್ತು ಮರೆಯುವಂತದ್ದಲ್ಲ. ಈದುಲ್ ಫಿತ್ರ್ ಮತ್ತು ರಮಝಾನ್ ಅದನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ಜಾಗತಿಕ ಮುಸ್ಲಿಮರೆಲ್ಲರೂ ರಮಝಾನಿನಲ್ಲಿ ಹಗಲಿನಲ್ಲಿ ವ್ರತಾನುಷ್ಠಾನಗೈದು ಅನ್ನಪಾನೀಯಗಳನ್ನು ತ್ಯಜಿಸುತ್ತಾರೆ. ರಾತ್ರಿ ಸಮಯದಲ್ಲಿ ನಮಾಝಿನಲ್ಲಿ ನಿರತರಾಗುತ್ತಾರೆ. ಎಲ್ಲೆಡೆಯೂ ಒಂದೇ ರೀತಿಯಲ್ಲಿ ಹಬ್ಬದ ಆಚರಣೆಯೂ ನಡೆಯುತ್ತದೆ. “ಒಂದೇ ಸಮುದಾಯ; ಸಂಘಟಿಕ ಶಕ್ತಿ” ಎಂಬುವುದನ್ನು ಇವೆಲ್ಲವೂ ವ್ಯಕ್ತಪಡಿಸುತ್ತದೆ. ಸಂಘಟಿತ ಶಕ್ತಿಯನ್ನು ಕಾಪಾಡಿಕೊಂಡು ಬರಬೇಕಾದ ಸ್ಪಷ್ಟ ಸಂದೇಶವನ್ನು ಈದುಲ್ ಫಿತ್ರ್ ನೀಡುತ್ತದೆ. ಮುಸ್ಲಿಮರ ಜೀವನದ ಪ್ರತಿಯೊಂದು ಹಂತದಲ್ಲೂ ದೈವಿಕ ಸ್ಮರಣೆ ಮತ್ತು ಅರ್ಪಣಾ ಮನೋಭಾವವನ್ನು ನಿರ್ಲಕ್ಷಿಸಲು ಅವಕಾಶವೇ ಇಲ್ಲ. “ನನ್ನ ನಮಾಝ್ ಮತ್ತು ಇನ್ನಿತರ ಸತ್ಕರ್ಮಗಳು, ನನ್ನ ಜೀವನ-ಮರಣವು ಪ್ರಪಂಚದ ಪರಿಪಾಲಕನಾದ ಅಲ್ಲಾಹನಿಗೋಸ್ಕರವಾಗಿದೆ” ಎಂದು ಘೋಷಿಸುವಂತೆ ಆಹ್ವಾನ ನೀಡಲಾಗಿದೆ. ದಿನನಿತ್ಯದ ಐದು ಹೊತ್ತಿನ ನಮಾರhನ ಪ್ರಾರಂಭದ ಪ್ರಾರ್ಥನೆಯಲ್ಲಿ ಈ ಘೋಷಣೆಯನ್ನು ಪುರಾವರ್ತಿತವಾಗಿ ಹೇಳಲಾಗುತ್ತದೆ. ಸಂತೋಷ-ಸಂತಾಪ, ಆಚರಣೆ-ಆರಾಧನೆ, ವಿಶ್ರಾಂತಿ-ಪರಿಶ್ರಮ ಮುಂತಾದ ಜೀವನದ ಸಕಲ ವಿಷಯಗಳೂ ಅಲ್ಲಾಹನ ಆಜ್ಞೆಯನುಸಾರವಾಗಿರಬೇಕು. ಅವನ ಪ್ರೀತಿ, ಆಶಿರ್ವಾದ ಪಡೆಯಲು ಅರ್ಹವಾಗಿರಬೇಕು ಎಂಬುವುದೇ ಇದರ ತಾತ್ಪರ್ಯ.

ಜಮಾಅತ್ತಾಗಿ(ಒಗ್ಗಟ್ಟಾಗಿ) ನಿರ್ವಹಿಸಬೇಕಾದ ಈದ್ ನಮಾಝ್ ಮತ್ತು ಕುತ್ಬಾವು ಈದ್‌ನ ಪ್ರಮುಖ ಆರಾಧನೆಗಳಾಗಿವೆ. ಭಕ್ತರೆಲ್ಲರೂ ನಿರ್ವಹಿಸುವ ಈದ್ ನಮಾಝ್ಮತ್ತು ಅದಕ್ಕೆ ಸಂಬಂಧಪಟ್ಟಂತೆ ಕುತ್ಬುಬಾ, ಪ್ರಾರ್ಥನೆ… ಮುಂತಾದವುಗಳೆಲ್ಲವೂ ಅವರ ಆರಾಧನೆಯಲ್ಲಿ ಸಾಮೂಹಿಕ ಪ್ರಜ್ಞೆಯನ್ನು ಮೂಡಿಸುತ್ತದೆ. ಪರಸ್ಪರ ಭೇಟಿಯಾಗಲು, ಸ್ನೇಹ ಸಂಬಂಧವನ್ನು ನವೀಕರಿಸಲು, ಸಹೋದರತ್ವ ಪ್ರಜ್ಞೆಯನ್ನು ಗಟ್ಟಿಗೊಳಿಸಲು ಇದು ಅವರಿಗೆ ಕಲಿಸುತ್ತದೆ.

ಅಲ್ಲಾಹನ ಮಹತ್ವನ್ನು ವೈಭವೀಕರಿಸುವ ತಕ್ಬೀರ್ ಈದ್‌ಗೆ ಸಂಬಂಧಪಟ್ಟತಹ ಸುನ್ನತ್ತಾದ ಕರ್ಮವಾಗಿದೆ. ಶವ್ವಾಲ್ ತಿಂಗಳ ಚಂದ್ರದರ್ಶನದಿಂದ ಹಿಡಿದು ಈದ್ ನಮಾಝ್ ನಿರ್ವಹಿಸುವವರೆಗೆ ಇದರ ಸಮಯವಾಗಿದೆ. ಮನೆ, ಮಸೀದಿಗಳಲ್ಲಿ, ಭಕ್ತರು ಒಟ್ಟುಗೂಡುವ ಸ್ಥಳಗಳಲ್ಲಿ, ದಿನ ನಿತ್ಯದ ನಮಾಝ್‌ನ ನಂತರವೂ ತಕ್ಬೀರ್ ಹೇಳುವುದು ಸುನ್ನತ್ತಾಗಿದೆ.

ಸೃಷ್ಟಿಕರ್ತನ ಉನ್ನತವಾದ ಮಹತ್ವವನ್ನು ಒಪ್ಪಿಕೊಂಡು ಅದನ್ನು ಪ್ರಕಟಿಸುವುದಾಗಿದೆ ತಕ್ಬೀರ್. ಅವನ ಮುಂದಿರುವ ಬೇಷರತ್ತಾದ ವಿಧೇಯತೆಯ ಪ್ರದರ್ಶನವಾಗಿದೆ ಅದು. ಅಲ್ಲಾಹು ಅಕ್ಬರ್ ಎಂಬ ತಕ್ಬೀರ್ ಮಂತ್ರವು ರಣಾಂಗದಲ್ಲಿ ಮುಸ್ಲಿಮರ ಆತ್ಮ ಶಕ್ತಿಯ ಮೂಲವಾಗಿತ್ತು. ನಮಾಝ್‌ನಲ್ಲಿ ಪುರಾವರ್ತಿತವಾಗಿ ಉಚ್ಛರಿಸಲಾಗುವ ತಕ್ಬೀರ್ ಮುಸ್ಲಿಮರ ಜೀವನದ ಮುಖ್ಯಧಾರೆಯಲ್ಲಿ ಬೆರೆತು ಹೋಗಿದದ್ದಾಗಿದೆ.

ಈದ್‌ನ ಸಂತೋಷವನ್ನು ವ್ಯಕ್ತಿಗಳು ಏಕಾಂತವಾಗಿ ಹಂಚಿಕೊಳ್ಳುವುದಿಲ್ಲ. ಸಂಬಂಧಿಕರ ಅಥವಾ ಸಮುದಾಯದ ಜೊತೆ ಸೇರಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಹೊಸ ಬಟ್ಟೆಗಳನ್ನು ಧರಿಸಿ, ಸುಗಂಧ ದ್ರವ್ಯಗಳಲ್ಲಿ ಹಚ್ಚಿ, ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿ ಆಸ್ವಾದಿಸಲಾಗುತ್ತದೆ. ಆ ಮೂಲಕ ಸಮುದಾಯದಲ್ಲಿ ಹಸಿವಿನಿಂದ ಮಲಗುವವರು ಯಾರೂ ಇರಬಾರದೆಂಬುದು ಇಸ್ಲಾಮಿನ ತತ್ಪರ್ಯ. ಫಿತ್ರ್ ಝಕಾತನ್ನು ಕಡ್ಡಾಯಗೊಳಿಸಿರುವುದು ಇದೇ ಕಾರಣಕ್ಕಾಗಿದೆ. ಈದ್ ದಿನದಂದು ಉಪವಾಸ ಹಿಡಿಯುವುದು ನಿಷಿದ್ಧಗೊಳಿಸಲಾಗಿದೆ. ಈದ್ ದಿನವು ಅಲ್ಲಾಹನಿಂದ ಗೌರವಿಸಲ್ಪಟ್ಟದ್ದಾಗಿದೆ. ಅಂದು ನಮಾರh ಮಾಡುತ್ತಾ, ಪ್ರಾರ್ಥಿಸುತ್ತಲಿರುವ ಸಚ್ಛರಿತರಾದ ದಾಸರ ಮೇಲೆ ಅಲ್ಲಾಹನ ಕುರುಣೆ ಇರುತ್ತದೆ. ಪ್ರವಾದಿ (ಸ.ಅ) ಹೇಳಿದ್ದಾರೆ; “ಪಶ್ಚಾತಾಪವನ್ನು ಸ್ವೀಕರಿಸಲಾಗುತ್ತದೆ. ಪ್ರತ್ಯೇಕವಾಗಿ ಮಲಕುಗಳೊಂದಿಗೆ ಇವರ ಕುರಿತು ಅಲ್ಲಾಹನು ಹಾಡಿ ಹೊಗಳುವನು” ಎಂಬುದನ್ನು ಪ್ರವಾದಿ ವಚನಗಳು ತಿಳಿಸುತ್ತದೆ.

ಆ ಹೊಗಳಿಕೆಗೆ ಪಾತ್ರರಾಗಲು ನಾವು ಕಠಿಣ ಪ್ರಯತ್ನ ನಡೆಸಬೇಕು. ಪಶ್ಚಾತಾಪ ಪಡಲು, ವಿಶೇಷ ಪ್ರಾರ್ಥನೆ ನಡೆಸಲು ಈದ್ ದಿನವನ್ನು ಬಳಸಿಕೊಳ್ಳಬೇಕು. ನಿರ್ಗತಿಕರಿಗೆ ಸಹಾಯ ಮಾಡುವುದು ಸೆರಿದಂತೆ ಇನ್ನಿತರ ಪುಣ್ಯ ಕಾರ್ಯಗಳಲ್ಲಿ ಭಾಗಿಗಳಾಗೋಣ. ಒಟ್ಟಿನಲ್ಲಿ ಮಹತ್ತರವಾದ ಈ ದಿನದ ಪಾವಿತ್ರತೆಗೆ ಕಳಂಕವುಂಟು ಮಾಡುವ ವಿಷಯಗಳಿಂದ ದೂರವುಳಿಯುವ ಬಗ್ಗೆ ಮುಸ್ಲಿಮರು ಎಚ್ಚರವಹಿಸಬೇಕು.

ಇದನ್ನೂ ಓದಿ