Mon. May 20th, 2024

ಸಮಸ್ತವನ್ನು ವಿರೋಧಿಸಿದವರೆಲ್ಲ ಪರಾಭವಗೊಂಡಿರುವುದೇ ಸತ್ಯ!

ಶೈಖುನಾ ಶಂಸುಲ್ ಉಲಮಾರೊಂದಿಗಿನ ಐತಿಹಾಸಿಕ ಸಂದರ್ಶನ

ಸಮಸ್ತದ ಧೀರ್ಘ ಕಾಲದ ಕಾರ್ಯದರ್ಶಿಯಾಗಿದ್ದ ಶೈಖುನಾ ಶಂಶುಲ್ ಉಲಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಅವರೊಂದಿಗೆ ಮಾಧ್ಯಮದವರು ನಡೆಸಿದ ಸಂದರ್ಶನದ ಭಾಗ. ಅಮೂಲ್ಯ ರತ್ನ ಪುಸ್ತಕದಲ್ಲಿ ಪ್ರಕಟಗೊಂಡ ಈ ಸಂದರ್ಶನವನ್ನು ಯಥವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.

  • ಸಮಸ್ತ ಎಂಬ ಆಶಯ ಹುಟ್ಟಿಕೊಳ್ಳಲು ಕಾರಣವೇನು?
    – ಕೇರಳವು ಸಮಾಧಾನಕರವಾಗಿ ಸಾಗುತ್ತಿತ್ತು. ಮುಸ್ಲಿಮರು ಧಾರ್ಮಿಕ ಪ್ರಜ್ಞೆ ಹಾಗೂ ವಿದ್ವಾಂಸರ ಬಗ್ಗೆ ಗೌರವವನ್ನು ಹೊಂದಿದವರಾಗಿದ್ದರು. ವಿದ್ವಾಂಸರ ಆಧ್ಯಾತ್ಮದ ಮಾರ್ಗದರ್ಶನದಲ್ಲಿ ಶಿಸ್ತುಬದ್ದರಾಗಿ, ಒಗ್ಗಟ್ಟಾಗಿ ಮುಂದುವರಿಯುತ್ತಿದ್ದ ಸನ್ನಿವೇಶದ ಮಧ್ಯೆ ಕೆಲವರು ಪ್ರತ್ಯಕ್ಷಗೊಂಡರು. ಈಜಿಫ್ಟ್‌ನ ರಶೀದ್ ರಿಸಾರವರ ಅಲ್ ಮನಾರ್‌ನ ಮೂಲಕ ಅವರು ವಹಾಬಿ ಆಶಯಗಳನ್ನು ಮೈಗೂಡಿಸಿಕೊಂಡಿದ್ದರು. ಆ ಕೆಟ್ಟ ಚಿಂತನೆಗಳನ್ನು ಮುಸ್ಲಿಂ ಸಮುದಾಯದ ಮಧ್ಯೆ ಪ್ರಚಾರಪಡಿಸಲು, ಮುಸ್ಲಿಮರ ವಿಶ್ವಾಸ ಪ್ರಮಾಣಗಳಲ್ಲಿ ಬದಲಾವಣೆಗಳನ್ನುಂಟು ಮಾಡಲು ಹಾಗೂ ಅನುಷ್ಠಾನ ಕರ್ಮಗಳನ್ನು ಪ್ರಶ್ನಿಸಲು ಅವರು ಮುಂದಾದರು. ವಿದ್ವಾಂಸರ ವೇಷದಲ್ಲಿ ಕಾಣಿಸಿಕೊಂಡ ಅವರ ಇಂತಹ ಚಟುವಟಿಕೆಗಳಲ್ಲಿ ಸಾಮಾನ್ಯ ಜನರು ವಂಚನೆಗೊಳಗಾಗಿ ದಾರಿತಪ್ಪಲಾರಂಭಿಸಿದಾಗ ಅಂದಿನ ಸುನ್ನಿ ಉಲಮಾಗಳು ಸಂಘಟಿತವಾಗಿ ಅಂತಹ ನೂತನ ಆಶಯಗಳನ್ನು ವಿರೋಧಿಸಲು ರಂಗಕ್ಕಿಳಿದರು. ಅದುವೇ ಸಮಸ್ತ!
  • ಸಮಸ್ತದ ಉಗಮಕ್ಕೆ ಯತ್ನಿಸಿದ ವಿದ್ವಾಂಸರು ಯಾರೆಲ್ಲ?
    – ಅದೆಲ್ಲವೂ ನಿಮಗೆ ತಿಳಿದ ಚರಿತ್ರೆಯಲ್ಲವೇ? ನಾನು ಯಾಕೆ ಅದೆಲ್ಲವನ್ನು ಹೇಳಬೇಕು. ವರಕ್ಕಲ್ ಮುಲ್ಲಕ್ಕೋಯ ತಂಙಳ್, ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್, ಮೌಲಾನಾ ಯೂಸುಫುಲ್ ಫಳ್‌ಫರಿ, ಪಾನಾಯಿಕ್ಕುಳಂ, ಕುತುಬಿ ಮುಂತಾದವರೆಲ್ಲ ಸಮಸ್ತವನ್ನು ಪ್ರಾರಂಭಿಸುವಲ್ಲಿ ಹಾಗೂ ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ.
  • ಸಮಸ್ತದ ಪ್ರಮುಖ ಗುರಿಗಳೇನು?
    – ಗುರಿಗಳ ಬಗ್ಗೆ ಏನೆಂದು ಹೇಳಲಿ… ಸುನ್ನತ್ ಜಮಾಅತ್ ಅನ್ನು ವಿರೋಧಿಸುವವರನ್ನು ವಿರೋಧಿಸುವುದು ಮಾತ್ರವಾಗಿದೆ ಸಮಸ್ತದ ಗುರಿ. ಸಮಸ್ತದಿಂದ ಹೊರಗುಳಿದವರೆಲ್ಲರಿಗೂ ಒಂದು ಗುರಿ ಇದೆ. ಅದು ಸಮಸ್ತವನ್ನು ವಿರೋಧಿಸುವುದಾಗಿದೆ. ಇದೊಂದು ಬಹು ತಮಾಷೆಯಾಗಿದೆ. ಸಮಸ್ತವನ್ನು ವಿರೋಧಿಸಬೇಕೆಂಬ ಗುರಿಯನ್ನು ಸಾಧಿಸಲು ವಿರೋಧಿಗಳು, ಖಾದಿಯಾನಿಗಳು, ನಕಲಿ ತ್ವರೀಕತ್ ಮುತಾದವರು ಕ್ರಿಶ್ಚಿಯನ್ನರನ್ನು ಹಾಗೂ ಆರೆಸ್ಸೆಸ್ಸಿಗರನ್ನೂ ಜೊತೆಗೆ ಸೇರಿಸಿಕೊಂಡಿದ್ದಾರೆ. ವಿರೋಧಿಗಳಿಗೆ ಸಂಘಟನೆಗಳು ಧಾರಾಳವಿದೆ. ಅವರ ಬಳಿ ಹಲವು ಅಜಂಡಾಗಳಿವೆ. ಹಲವು ವಿಷಯಗಳಲ್ಲಿ ಅವರ ಮಧ್ಯೆ ಪರಸ್ಪರ ತರ್ಕಗಳಿವೆ. ಆದರೆ ಸಮಸ್ತವವನ್ನು ವಿರೋಧಿಸುವ ವಿಷಯ ಬಂದಾಗ ಅವರೆಲ್ಲರೂ ಒಗ್ಗಟ್ಟಾಗುತ್ತಾರೆ. ಒಗ್ಗಟ್ಟಾಗಿಯೇ ಅವರು ನಮ್ಮ ವಿರುದ್ಧ ಸಾಗುತ್ತಾರೆ. ಇದನ್ನು ತಿಳಿದುಕೊಳ್ಳಲು ಸಾಧ್ಯವಾಗದೇ ಹೋದದ್ದು ನಮ್ಮ ದುರಂತ.
  • ಸಮಸ್ತ ಒಂದು ವಿಮರ್ಶಕ ಸಂಘಟನೆಯಾಗಿದೆ ಎಂಬ ಪ್ರಚಾರವು ತಮ್ಮ ಗಮನಕ್ಕೆ ಬಂದಿದಿಯೇ?
    – ಬಾತ್ವಿಲ್ (ಮಿಥ್ಯ)ವನ್ನು ಹೇಗಾದರೂ ವಿರೋಧಿಸುವುದು ಸಮಸ್ತ ನಿಲುವು ಆಗಿದೆ. ಆ ವಿಷಯದಲ್ಲಿ ನಾವು ಯಾರನ್ನೂ ಭಯಪಡುವುದಿಲ್ಲ. ಯಾರ ಮುಖವನ್ನೂ ನೋಡುವುದಿಲ್ಲ. ವಾಸ್ತವವನ್ನು ಮನವರಿಕೆ ಮಾಡಿಕೊಡುವುದಾಗಿದೆ ಸಮಸ್ತದ ಗುರಿ. ಅದು ವಿದ್ವಾಂಸರ ಕರ್ತವ್ಯವೂ ಆಗಿದೆ. ವಿರೋಧಿಗಳ ಗುರಿ ಸಮಸ್ತವನ್ನು ವಿರೋಧಿಸುವುದಾಗಿದೆ. ಇದುವೇ ವ್ಯತ್ಯಾಸ.
  • ಸಮಸ್ತದ ಕಾರ್ಯಚಟುವಟಿಕೆಗಳನು ಮುಸ್ಲಿಮರಿಗೆ ಮಾತ್ರ ಸೀಮಿತಗೊಳಿಸಿರುವುದು ಯಾಕೆ?
    – ಹಾಗೇನಿಲ್ಲ. ಮುಸಲ್ಮಾನರು ನೈಜ ಮುಸ್ಲಿಮರಾಗಿ ಬದಲಾಗಬೇಕು. ಇಸ್ಲಾಮಿನ ಧರ್ಮ ಪ್ರಬೋಧನೆಗೆ ಅತ್ಯಂತ ಸೂಕ್ತ ಮಾರ್ಗ ಅದಾಗಿದೆ. ಮುಸ್ಲಿಮರು ಸರಿಯಾದ ರೀತಿಯಲ್ಲಿ ಬದುಕುವಾಗ ಇತರರು ಅದನ್ನು ನೋಡಿ ತಿಳಿದು ಸ್ವತಃ ಒಳ್ಳೆಯವರಾಗುತ್ತಾರೆ. ಪೂವಿರ್ಕರ ಇತಿಹಾಸವು ಅದನ್ನು ಸಾಬೀತುಪಡಿಸಿದೆ. ಸಂಖ್ಯೆಯಲ್ಲಿ ತುಂಬಾ ಮುಸ್ಲಿಮರರನ್ನು ಉಂಟುಮಾಡಿ ಜನಸಂಖ್ಯೆಯನ್ನು ವೃದ್ಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಇರುವವರು ನೈಜ ಮುಸ್ಲಿಮರಾಗಿ ಬದುಕುಲು ಪ್ರಾರಂಭಿಸಿದರೆ ಅದರಿಂದ ದೊಡ್ಡ ಪ್ರಯೋಜನಗಳುಂಟಾಗಬಹುದು. ಈ ನಿಲುವನ್ನು ಸಮಸ್ತವು ತಾಳಿದೆ. ಸಮುದಾಯದ ಸಂಸ್ಕರಣೆಯಲ್ಲಿ ನಾವು ತೊಡಗಿಸಿಕೊಂಡಿದ್ದೇವೆ.
  • ಭೌತಿಕ ಕ್ಷೇತ್ರದಲ್ಲಿ ಸಮಸ್ತದ ಕಾರ್ಯಚಟುವಟಿಕೆಗಳೇನು?
    – ಭೌತಿಕ ಏಳಿಗೆಗಳಿಗೆ ಸಮಸ್ತ ವಿರುದ್ಧವಲ್ಲ. ಆಧ್ಯಾತ್ಮಿಕ ಜ್ಞಾನಗಳನ್ನೊಳಗೊಂಡ ಭೌತಿಕ ವಿದ್ಯಾಭ್ಯಾಸ ಮತ್ತು ಅದಕ್ಕಣುಗುಣವಾದ ಅಭಿವೃದ್ಧಿಯ ಅಗತ್ಯವೂ ಇದೆ. ಈ ಉದ್ದೇಶಕ್ಕಾಗಿ ನಾವು ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದೇವೆ.
  • ಧಾರ್ಮಿಕ-ಲೌಕಿಕ ವಿದ್ಯಾಭ್ಯಾಸ ಸಮನ್ವಯಗೊಂಡ ಒಂದು ಇಸ್ಲಾಮಿಕ್ ಆರ್ಟ್ಸ್ ಕಾಲೇಜು ಇಂದು ಅಗತ್ಯವಲ್ಲವೇ?
    – ಅದು ಪರಿಗಣನೆಯಲ್ಲಿದೆ.
  • ಭಾರತೀಯ ಮುಸಲ್ಮಾನರ ಸಮಾಜಿಕ ಸಮಸ್ಯೆಗಳು ಯಾವುವು?
    – ಮುಸ್ಲಿಮರಿಗೆ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ ಅವಕಾಶವನ್ನು ನೀಡಬೇಕು. ಕೋಮು ಗಲಭೆಗಳು ಮತ್ತು ಭೌತಿಕ ಕ್ಷೇತ್ರದಲ್ಲಿ ಅನುಭವಿಸುವ ತಾರತಮ್ಯಗಳಾಗಿವೆ ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳು.
  • ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳ ವಿರುದ್ಧ ಸಾವಲುಗಳು ಎದುರಾಗುತ್ತಿವೆ. ಇದಕ್ಕೇನಾದರೂ ಪರಿಹಾರ ಸೂಚಿಸಬಹುದೇ?
    – ಸರಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ಲಭಿಸಬೇಕು. ಕೋಮುಭಾವನೆಗಳನ್ನು ತೊರೆದು ಭಾರತೀಯರೆಲ್ಲ ಸಹೋದರ ಸಹೋದರಿಯರೆಂಬ ಭಾವನೆಯನ್ನು ಬೆಳೆಸಬೇಕು. ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಸರಕಾರವು ಗಮನಹರಿಸಬೇಕು.
  • ಭಾರತದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಂಪೂರ್ಣವೇ? ಚಾಲ್ತಿಯಲ್ಲಿರುವ ಮುಸ್ಲಿಂ ಪರ್ನಸಲ್ ಲಾ ನಲ್ಲಿ ಇಸ್ಲಾಮಿಕ್ ಆಧಾರದಲ್ಲಿ ಬದಲಾವಣೆ ತರಬಹುದಲ್ಲವೇ?
    – ಭಾರತದ ಮುಸ್ಲಿಂ ಪರ್ಸನಲ್ ಲಾ ಸಂಪೂರ್ಣ ಶರೀಅತ್ ನಿಯಮಗಳಲ್ಲ. ಚಾಲ್ತಿಯಲ್ಲಿದ್ದ ಖಾಝಿಗಳ ಅಧಿಕಾರವನ್ನು ಸರಕಾರ (ನ್ಯಾಯಾಲಯ) ತನ್ನದಾಗಿಸಿಕೊಂಡಿತು. ಮುಸ್ಲಿಮರಿಗೆ ಒಪ್ಪಿಗೆ ಲಭಿಸಿದ್ದು ಶರೀಅತ್‌ನ ಕೆಲವೊಂದು ಭಾಗಗಳಿಗೆ ಮಾತ್ರ. ವಿವಾಹ, ವಿವಾಹ ವಿಚ್ಛೇಧನ, ವಾರಿಸುದಾರಿಕೆ ಮುಂತಾದ ವ್ಯಯುಕಿಕ ಕಾನೂನುಗಳಲ್ಲಿ ಅಂದಿನ ಖಾಝಿಯವರ ತೀರ್ಪಿಗೆ ಸರಕಾರ ಒಪ್ಪಿಗೆಯನ್ನು ಸೂಚಿಸುತ್ತಿತ್ತು. ನಮಗೆ ಒಪ್ಪಿಗೆ ಲಭಿಸಿದ ಈ ಕಾನೂನುಗಳಲ್ಲಿ ಬದಲಾವಣೆಬೇಕೆಂಬ ವಾದವು ಅಪ್ರಸ್ತುತವಾಗಿದೆ. ಅದಕ್ಕೆಂದೂ ಅವಕಾಶ ನೀಡಬಾರದು.
  • ಕಾರ್ಯದರ್ಶಿ ಎಂಬ ನಿಟ್ಟಿನಲ್ಲಿ ಸಮಸ್ತದ ಈಗಿನ ಸಂಘಟನಾ ಸನ್ನಿವೇಶನಗಳ ಬಗ್ಗೆ ಏನು ಹೇಳುತ್ತೀರಿ?
    – ಇಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಮಗೇನು ಸಂಭವಿಸಲಿಕ್ಕೂ ಇಲ್ಲ. ಕೆಲವರು ಸಮುದಾಯದ ಹೆಸರು ಹೇಳಿ ವಂಚಿಸುತ್ತಿದ್ದಾರೆ. ಅವರಿಗೆ ಸಮಸ್ತ ಇಬ್ಬಾಗವಾಗಿ ಕಾಣುವ ಹಂಬಲವಿದೆ. ಅದು ಸಂಭವಿಸಲು ಸಾಧ್ಯವಿಲ್ಲ. ವಿದ್ವಾಂಸರುಗಳ ಮಧ್ಯೆ ಭಿನ್ನತೆಯನ್ನು ಸೃಷ್ಟಿಯಲು ಯತ್ನಿಸುತ್ತಿದ್ದಾರೆ. ಸಮಸ್ತದ ಉಗಮ ಕಾಲದಿಂದಲೇ ರಾಜಕಾರಣಿಗಳು ವಿರೋಧಿಸುತ್ತಾ ಬಂದಿದ್ದಾರೆ. ಒಡೆಯಲು ಅವರು ಹಲವು ಬಾರಿ ಶ್ರಮಿಸಿದ್ದಾರೆ. ನೋಡಿ; ‘ಅಖಿಲ’ ಎಂಬ ಹೆಸರಿನಲ್ಲಿ ಕೆಲವರನ್ನು ಒಗ್ಗೂಡಿಸಿ ಸಂಘಟನೆಯನ್ನು ಹುಟ್ಟು ಹಾಕಿದ್ದು ರಾಜಕಾರಣಿಗಳಾಗಿದ್ದರು. ಕೊನೆಗೆ ಏನಾಯಿತು? ಸಮಸ್ತವನ್ನು ವಿರೋಧಿಸಿದವರು ಮತ್ತು ಒಡೆಯಲು ಪ್ರಯತ್ನಿಸಿದವರೆಲ್ಲ ಪರಾಭವಗೊಂಡಿರುವುದೇ ಸತ್ಯ. ಮುಂದೆಯೂ ಅದಕ್ಕಿಂತ ಹೆಚ್ಚಿನದ್ದೇನೂ ಸಂಭವಿಸಲು ಸಾಧ್ಯವಿಲ್ಲ.
  • ಸಂಘಟನಾ ಕ್ಷೇತ್ರದಲ್ಲಿ ಈಗ ಅತ್ಯಂತ ಅನಿವಾರ್ಯವಾದ ನಡೆ ಯಾವುದು?
    – ಶಕ್ತವಾದ ಪ್ರತಿರೋಧವು ಇದೀಗ ಆವಶ್ಯ. ಸುನ್ನಿ ವಿರೋಧಿಗಳೆಲ್ಲ ಒಗ್ಗಟ್ಟಾಗಿ ನಮ್ಮನ್ನು ವಿರೋಧಿಸುತ್ತಿದ್ದಾರೆ. ರಾಜಕೀಯ ಹಸ್ತಕ್ಷೇಪವು ಮುಸ್ಲಿಂ ಜನಸಾಮಾನ್ಯರನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ. ಈ ಸನ್ನಿವೇಶದಲ್ಲಿ ಸುನ್ನಿ ವಿರೋಧಿಗಳಿಗೂ, ರಾಜಕೀಯ ಹಸ್ತಕ್ಷೇಪದ ವಿರುದ್ಧ ಅತ್ಯಂತ ಶಕ್ತವಾದ ಪ್ರತಿರೋಧವನ್ನು ಸಜ್ಜುಗೊಳಿಸಬೇಕಿದೆ. ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನವನ್ನೂ ಮಾಡಬೇಕಿದೆ. ರಾಜಕೀಯವಾಗಿದೆ ನಾವು ಎದರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ. ರಾಜಕೀಯ ಹಸ್ತಕ್ಷೇಪವನ್ನು ತಡೆಗಟ್ಟಲು ಸಾಧ್ಯವಾದರೆ ನಮಗೆ ಕಾರ್ಯಕರ್ತರನ್ನು ಒಗ್ಗೂಡಿಸಲು ಸುಲಭವಾಗಬಹುದು. ಆಧ್ಯಾತ್ಮಿಕ ಪ್ರಜ್ಞೆಯನ್ನು ಮೂಡಿಸುವುದೇ ಇದಕ್ಕಿರುವ ಅತ್ಯಂತ ಪ್ರಮುಖ ದಾರಿ.
  • ಸಂಘಟನೆಗೆ ವಿರುದ್ಧವಾಗಿ ಕೆಲವರು ಆರೋಪಗಳನ್ನು ಹೊರಿಸುತ್ತಿದ್ದಾರಲ್ಲವೇ?
    – ಆರೋಪಗಳು, ವಿರೋಧಗಳನ್ನು ಪ್ರತಿಯೊಂದು ಸಂಘಟನೆಗಳು ಎದುರಿಸಬೇಕಾಗಿ ಬರುತ್ತದೆ. ಅದು ಯಾವುದನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
  • ಕಾರ್ಯಕರ್ತರೊಂದಿಗೆ ಏನು ಹೇಳಬಯಸುತ್ತೀರಿ?
    – ಧಾರ್ಮಿಕ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ಸುನ್ನತ್ ಜಮಾತ್ತಿನ ರಂಗದಲ್ಲಿ ಸಕ್ರೀಯವಾಗಿ ಸೇವೆಗೈಯಲ್ಲು ಮುಂದಾಗಬೇಕು. ಭೌತಿಕ ವ್ಯಾಮೋಹಗಳ ದಾಸರಾಗಿ ನಶಿಸಿ ಹೋಗದೆ ಆಧ್ಯಾತ್ಮಿಕ ಪ್ರಜ್ಞೆಯೊಂದಿಗೆ ಬದುಕಬೇಕು. ಎಲ್ಲಾ ಶತ್ರುಗಳು ಸುನ್ನತ್ ಜಮಾತ್ತನ್ನು ಸೋಲಿಸಲು ಒಗ್ಗಟ್ಟಾಗಿದ್ದಾರೆ. ಇದನ್ನು ಮನವರಿಕೆ ಮಾಡಿಕೊಂಡು ಆತ್ಮವಿಶ್ವಾಸದಿಂದಲೇ ಕಾರ್ಯಕರ್ತರು ಕರ್ಮರಂಗಕ್ಕಿಳಿಯಬೇಕು.

ಇದನ್ನೂ ಓದಿ